ಕಸಿಮಾಡುವಿಕೆ, ಅಂಗಾಂಶದ ಮತ್ತು ಅಂಗದ

 ಮೈಯಲ್ಲಿ ಎಲ್ಲಾದರೂ ಕೊರೆಯಾಗಿರುವ, ಕೆಲಸಗೆಟ್ಟಿರುವ, ಹಾಳಾಗಿರುವ ಊತಕ ಇಲ್ಲವೇ ಅಂಗದ ಬದಲಾಗಿ ಒಂದು ಜೀವಿಯ ಬೇರೆಡೆಯಿಂದಲೋ ಅದೇ ಜಾತಿಯ ಬೇರೆ ಜೀವಿಯಿಂದಲೋ ಬೇರೆ ಜಾತಿಯ ಪ್ರಾಣಿಯಿಂದಲೋ ಊತಕ ಇಲ್ಲವೇ ಅಂಗವನ್ನು ನಾಟಿ ಹಾಕುವಿಕೆ (ಗ್ರಾಫ್ಟಿಂಗ್, ಟ್ರಾನ್ಸ್‍ಪ್ಲಾಂಟೇಷನ್). ನಾಟಿ ಕೆಲಸ ಪ್ರಪಂಚದಲ್ಲಿ ಎಲ್ಲೆಲ್ಲೂ ಎಡೆ ಬಿಡದೆ ನಡೆದೇ ಇರುತ್ತದೆ. ಹೂಗಳಲ್ಲಿ ಪರಾಗದಾನವು ಪ್ರಾಣಿಗಳಲ್ಲಿ ಅಂಡಾಣು ರೇತುಕಣಗಳು ಕೂಡಿ ಫಲವಂತವಾಗುವುದೂ ಜೀವಿರಸದ (ಪ್ರೋಟೊಪ್ಲಾಸ್ಮ್) ನಾಟಿಗೆ ಉದಾಹರಣೆಗಳು.

 ಒಂದು ಜೀವಿಯ ದೇಹದ ಒಂದು ಭಾಗವನ್ನು ತೆಗೆದು ಅದೇ ಜೀವಿಗೆ ನಾಟಿ ಹಾಕಿದಲ್ಲಿ ಅದನ್ನು ತನ್ನ ನಾಟಿ (ಆಟೊಗ್ರಾಫ್ಟ್, ಆಟೊಟ್ರಾನ್ಸ್‍ಪ್ಲಾಂಟ್) ಎನುತ್ತೇವೆ.  ರಕ್ತ ಪೂರೈಕೆ, ಪುಷ್ಟಿ ಸಾಕಷ್ಟು ಸಿಗುತ್ತಿರುವ ತನಕ ಇದು ಬದುಕಿರುತ್ತದೆ. ಇಡೀ ಚರ್ಮ ಇಲ್ಲವೇ ಚರ್ಮದ ತೆಳುಪದರಗಳ ಚೂರುಗಳನ್ನು ಕೊಯ್ದು ತೆಗೆದು ಚರ್ಮ ಕಿತ್ತು ಹೋಗಿರುವ ಕಡೆ ಎಲ್ಲಾದರೂ ಸರಿಯೆ ನಾಟಿ ಹಾಕಬಹುದು.  ಬೇಗನೆ ಹೊಸ ರಕ್ತನಾಳಗಳು ಅದರಲ್ಲಿ ಹುಟ್ಟಿಕೊಳ್ಳುತ್ತವೆ.  ಪೂರಾ ಚರ್ಮ, ಚರ್ಮದಡಿಯ ಊತಕಗಳನ್ನು ಮೈಯಲ್ಲಿ ಬೇರೆಡೆ ನಾಟಿ ಹಾಕಿದಾಗ, ಅಲ್ಲಿ ಹೊಸ ರಕ್ತನಾಳಗಳು ಬೆಳೆದುಕೊಳ್ಳುವ ತನಕವಾದರೂ ಮೂಲ ಜಾಗದ ರಕ್ತನಾಳಗಳ ಸಂಬಂಧ ಕಡಿಯದಂತೆ ನೋಡಿಕೊಳ್ಳಬೇಕು.  ಅಂಗಗಳನ್ನು ನಾಟಿ ಹಾಕಬೇಕಾದರೂ ಅಷ್ಟೇ.  ಇಲ್ಲವಾದರೆ, ಹೊಸ ಜಾಗದಲ್ಲಿನ ರಕ್ತನಾಳಗಳ ಧಮನಿ, ಸಿರಗಳನ್ನು ಅಂಗದಲ್ಲಿ ಇರುವವಕ್ಕೆ ನೋಡಿ ಹೊಲಿಯಬೇಕಾಗುತ್ತದೆ.  ಎಂದಿನಂತೆ ಕೆಲಸ ನಡೆಸುತ್ತಿರಲು ನರಗಳನ್ನೂ ಕೂಡಿಸಿರಬೇಕು.

 ಬದಲಿ ಅಂಗಗಳ ನಾಟಿಯಲ್ಲಿ ಮೂತ್ರಪಿಂಡದ ಬಳಕೆಯಿಂದ ಎಷ್ಟೋ ಮಂದಿಗೆ ಪ್ರಾಣದಾನವಾಗಿದೆ. ಪ್ರಪಂಚದಲ್ಲಿ 2,000ಕ್ಕಿಂತಲೂ ಹೆಚ್ಚು ಮೂತ್ರಪಿಂಡಗಳನ್ನು ನಾಟಿ ಹಾಕಿದ್ದಾಗಿದೆ. ಕೊನೆಯ ಪಕ್ಷ ಇವುಗಳಲ್ಲಿ ಅರೆಪಾಲಿನಷ್ಟಾದರೂ ಬದುಕುಳಿದಿವೆ. ಇತ್ತೀಚೆಗೆ, ಮುಖ್ಯವಾಗಿ ಮೈಯಲ್ಲಿ ಒಂಟಿ ಅಂಗಗಳಾಗಿರುವ ಗುಂಡಿಗೆ, ಈಲಿ, ಮಾಂಸಲಿಗಳಲ್ಲದೆ ಸಣ್ಣ ಕರುಳುಗಳನ್ನೂ ಪುಪ್ಪುಸಗಳನ್ನೂ ನಾಟಿ ಹಾಕುವ ಯತ್ನಗಳಾಗಿವೆ. ಇವನ್ನು ನಾಟಿ ಹಾಕುವುದು ಕೈಗೂಡಿದ್ದರೂ ಹಾಕಿದವನ್ನು ಎಂದಿನಂತೆ ಉಳಿಯಬಿಡದೆ ದಾನಪಡೆದ ಮೈ ತಳ್ಳಿಹಾಕುತ್ತದೆ. ತನ್ನದಲ್ಲದ ಹೆರ ವಸ್ತುವಿಗೆ ಹೊಂದಿಕೊಳ್ಳದ ಗುಣವಾದ ಮರೆವಣೆಯೇ (ಇಮ್ಯೂನಿಟಿ) ಇದರ ಕಾರಣ. ಮರೆವಣೆಯನ್ನು ಅಣಗಿಸಿಡುವ ಇಂದಿನ ಮದ್ದುಗಳಿಂದ ಅಂಗನಾಟಿಗಳನ್ನು ಉಳಿಸಿಕೊಳ್ಳುವುದು ಕಳೆದ 18 ವರ್ಷಗಳಿಂದ ಸಾಧ್ಯವಾಗಿದೆ. ರೋಗದಿಂದ ಹಾಳುಗೆಟ್ಟಿರುವ ಗುಂಡಿಗೆ, ಈಲಿ, ಪುಪ್ಪುಸ, ಮೂತ್ರಪಿಂಡ ಮುಂತಾದ ಅಂಗಗಳ ಬದಲಾಗಿ ನಾಟಿ ಹಾಕುವ ಕಾಲ ಬರುತ್ತಿದೆ. ಇದರಿಂದ ಬಹಳ ಮಂದಿ ಬದುಕಿದ್ದಾರೆ. ಮರೆವಣೆ ಅಣಗಿಸುವುದರ ತೊಡಕುಗಳು, ಸೊಂಕು, ತಾಂತ್ರಿಕ ತಪ್ಪುಗಳು_ಇವು ಕೈಗೂಡದ್ದರ ಕಾರಣಗಳಲ್ಲಿ ಕೆಲವು.

 ಒಂದೇ ಜಾತಿಗೆ ಸೇರಿರುವ ಇನ್ನೊಂದು ಜೀವಿಯಿಂದ ಪಡೆದ ನಾಟಿಗೆ ಸರಿಜಾತಿ ನಾಟಿ (ಹೋಮೊಟ್ರಾನ್ಸ್‍ಪ್ಲಾಂಟ್, ಹೋಮೊಗ್ರಾಫ್ಟ್) ಎಂದು ಹೆಸರು. ದಾನವಾಗಿ ಪಡೆದ ಸರಿಜಾತಿ ನಾಟಿಗಳು, ಸಾಧಾರಣವಾಗಿ ಪಡೆದವರಲ್ಲಿ ಮರೆವಣೆಯನ್ನು ಚೋದಿಸುವುದರಿಂದ ಕೆಲವೇ ದಿನಗಳಲ್ಲೋ ವಾರಗಳಲ್ಲೋ ಸಾಯುತ್ತವೆ. ರಕ್ತ ನಾಳಗಳ ಒಳಪೊರೆ (ಎಂಡೊತೀಲಿಯಂ) ಹಾಳಾಗಿ ರಕ್ತ ಪೂರೈಕೆಗೆ ಅಡ್ಡಿಯಾಗುವುದೇ ಮುಖ್ಯ ಕಾರಣ. ಆ ದಾನಿಯಿಂದಲೇ ಪಡೆದ ಇನ್ನೊಂದು ನಾಟಿಯನ್ನು ಹಾಕಿದಾಗ ಮೊದಲಿನದಕ್ಕಿಂತ ಬೇಗನೆ ಹಾಳಾಗುವುದರಿಂದ ಇದು ಮರೆವಣೆಯ ವರ್ತನೆ ಎನ್ನುವುದು ಖಚಿತವಾಯಿತು. ಅಲ್ಲದೆ, ನಾಟಿ ಮೊದಲಿದ್ದ ಜಾಗದ ಹಾಲುರಸ (ಲಿಂಫ್) ಹರಿಯುತ್ತಿದ್ದ ಹಾಲುರಸ ಗಂಟುಗಳಿಂದ (ನೋಡ್ಸ್) ತೆಗೆದಜೀವಕಣಗಳನ್ನು ನಾಟಿ ಪಡೆವ ಪ್ರಾಣಿಗೆ ಹಾಕಿ, ಈ ಗುಣವನ್ನು ಇನ್ನೊಂದು ಜೀವಿಗೆ ಸಾಗಿಸಬಹುದಾದ್ದರಿಂದ ಇದಿನ್ನೂ ಖಚಿತವಾಯಿತು. ಈ ಪ್ರತಿಕ್ರಿಯೆಗೆ ಸಂಬಂಧಿಸಿದ ರೋಧಜನಕಗಳು (ಆ್ಯಂಟಿಜೆನ್ಸ್) ಜೀವಕಣಗಳ ನಡುಬೀಜಗಳಲ್ಲಿ (ನ್ಯೂಕ್ಲಿಯೈ) ಇರುತ್ತವೆ. ಈ ರೋಧಜನಕಗಳು ಸಂಮಿಶ್ರ ಲೋಳೆಪಾಲಿಸ್ಯಾಕರೈಡುಗಳು. ನಡುಬೀಜವಿರುವ ಎಲ್ಲ ಜೀವಕಣಗಳಲ್ಲೂ ಇರುವ ಇವಕ್ಕೆ ಜೀನುಗಳ ಸಂಬಂಧವಿದೆ. ನಾಟಿ ಪಡೆವ ಪ್ರಾಣಿಯ ರಸಿಕೆಯಲ್ಲಿ (ಸೀರಂ) ಕೆಲವೇಳೆ ರೋಧಜನಕಗಳಿರುತ್ತವೆ. ಆದರೆ ಸರಿ ಜಾತಿ ನಾಟಿಗಳನ್ನು ಹಾಳುಗೆಡಿಸುವವು ಮಾತ್ರ ಚುರುಕಾಗೀಡಾಗುವ ಹಾಲುರಸಕಣಗಳ (ಲಿಂಫೊಸೈಟ್ಸ್) ಮೂಲಕ ಸಾಗುತ್ತವೆ. ಕಾರ್ಟಿಸೋನ್ ಮದ್ದುಗಳಿಂದ ಸರಿಜಾತಿ ನಾಟಿಗಳು ಕೂಡಲೇ ಸಾಯದ ಹಾಗೆ ಇರಿಸಬಹುದು.

 ಸರಿಜಾರಿನಾಟಿಗಳಿಗೆ ಯಾವ ತೊಡಕೂ ಇಲ್ಲದೆ ನಾಟಿ ಹಾಕಿದೆಡೆ ಬದುಕುಳಿವ ಸಂದರ್ಭಗಳಿವು: ಪಡೆವವನೂ ದಾನಿಯೂ ಅವಳಿ ಇಲ್ಲವೇ ಒಂದೇ ಕುಟುಂಬದ ರಕ್ತಸಂಬಂಧಿಯಾಗಿರಬೇಕು; ಕೋಡುಪೊರೆ (ಕಾರ್ನಿಯ), ಮೆಲ್ಲೆಲುಬುಗಳ ಹಾಗೆ ರಕ್ತನಾಳಗಳೇ ಇಲ್ಲದ ಊತಕಗಳಾಗಿರಬೇಕು; ಸ್ಟಿರಾಯ್ಡ್ ಮದ್ದುಗಳನ್ನು ಹೆಚ್ಚೆಚ್ಚಾಗಿ ಕೊಡುತ್ತಿರಬೇಕು; ಮುಂದೆ ನಾಟಿಯ ದಾನಿಯಾಗುವವನ ಬದುಕಿರುವ ಜೀವಕಣಗಳನ್ನು ನಾಟಿಯನ್ನು ಪಡೆವ ಪ್ರಾಣಿಗೆ ಅದು ಗರ್ಭದಲ್ಲೇ ಇರುವಾಗಲೋ ಹುಟ್ಟಿದ ಕೂಡಲೆಯೋ ಚುಚ್ಚಿದ್ದರಿಂದ ಅದರ ಊತಕಗಳಿಗೆ ಹೊಂದಿಕೊಂಡಿರಬೇಕು; ನಾಟಿಯನ್ನು ಪಡೆವ ಪ್ರಾಣಿಯ ಇಡೀ ಮೈಯನ್ನು ವಿಕಿರಣತೆಗೆ ಒಡ್ಡಿರಬೇಕು; ಬೇರೆಡೆ ಹಾಕಿರುವ ನಾಟಿಯಿಂದ ರಸಗಳೂ ಪುಷ್ಟಿ ವಸ್ತುಗಳೂ ತೂರಿಹರಿವಂತೆ ಬಿಟ್ಟು ಅದರ ಜೀವಕಣಗಳನ್ನು ಮಾತ್ರ ತಡೆವಂತೆ ತೂತುಪದರ ಪೊರೆ ಅಡ್ಡವಾಗಿರಬೇಕು. ಬೇರೆ ಬೇರೆ ಲಿಂಗದ ಅವಳಿಗಳಲ್ಲಿ ಒಬ್ಬನಿಂದೊಬ್ಬನಿಗೆ ತೆಗೆದು ಬದಲಿಸಿದ ನಾಟ ಕೆಲಗಾಲ ಮಾತ್ರ ಬದುಕಿರುತ್ತದೆ. ದನಗಳಲ್ಲೂ ಅಪೂರ್ವವಾಗಿ ಮಾನವನಲ್ಲೂ ಗರ್ಭದಲ್ಲಿದ್ದಾಗ ಬೇರೆ ಬೇರೆ ಲಿಂಗಗಳ ಅವಳಿಗಳ ರಕ್ತ ಒಂದಕ್ಕೊಂದು ಬೆರೆಯಬಹುದು. ಹಾಗಾದಾಗ ಒಂದೊಂದರಲ್ಲೂ ಎರಡೂ ವರ್ಗಗಳ ಕೆಂಪು ರಕ್ತಕಣಗಳು ಇರುವುದರಿಂದ, ಅಂಥ ಅವಳಿಗಳಲ್ಲಿ ಒಂದಕ್ಕೊಂದು ಬದಲಿನಾಟಿ ಹಾಕಿದರೂ ಸಾಯದೆ ಉಳಿದಿರುತ್ತವೆ.

 ವಯಸ್ಕರ ರಕ್ತ ಹುಟ್ಟಿಸುವ ಮೂಳೆ ಮಜ್ಜೆಯಂಥ ಊತಕವನ್ನು ಸರಿಜಾತಿನಾಟಿಯಾಗಿ ಎಳೆಯ ಪ್ರಾಣಿಗೆ ಹಾಕಿದರೆ ಗುಜ್ಜಾರಿ ಆಗುತ್ತದೆ. ಬೆಳೆವಣಿಗೆ ಕುಗ್ಗಿ ಉಚ್ಚಾಟವಾಗಿ ಕೆಲವೇಳೆ ಸಾಯಬಹುದು. ವಿಕಿರಣತೆಗೀಡಾದ ಬೆಳೆದಿರುವ ಪ್ರಾಣಿಗೆ ನಾಟಿ ಹಾಕಿದರೂ ಅದೇ ತೆರನ ದ್ವಿತೀಯಕದ (ಸೆಕಂಡರಿ) ರೋಗ ತಲೆದೋರಬಹುದು.  ನಾಟಿಯನ್ನು ಪಡೆವ ಪ್ರಾಣಿಯ ಎದುರಾಗಿ ನಾಟಿಹಾಕಿದ ಕೆಲವು ಜೀವಕಣಗಳ ಮರೆವಣೆಯ ಪರಿಣಾಮವಿದೆಂದು ತೋರುತ್ತದೆ.

 ತನ್ನದಲ್ಲದ ಬೇರೆ ಜಾತಿಯಿಂದ ತಂದ ಊತಕ ಇಲ್ಲವೇ ಅಂಗಕ್ಕೆ ಹೆರಜಾತಿನಾಟಿ (ಅಲ್ಲೋಗ್ರಾಫ್ಟ್, ಹೆಟಿರೋಟ್ಲಾನ್ಸ್‍ಪ್ಲಾಂಟ್) ಎಂದು ಹೆಸರಿದೆ.  ಈ ನಾಟಿಯನ್ನು ಹಾಕಿದ ಮೇಲೆ ಸಾಮಾನ್ಯವಾಗಿ ಉಳಿಯದೆ ಸಾಯುವುದು. ಇದೂ ಮರೆವಣೆಯನ್ನು ಕೆರಳಿಸುತ್ತದೆ.  ಜೀವಕಣಗಳಿಗೆ ಸಾಧಾರಣವಾಗಿ ವಿಷಕರವಾಗುವ ರೋಧವಸ್ತುಗಳು (ಆಂಟಿಬಾಡೀಸ್) ನಾಟಿ ಪಡೆವವನ ರಸಿಕೆಯಲ್ಲಿ ಇರುವುದನ್ನು ತೋರಿಸಬಹುದು. ಇಷ್ಟಾದರೂ ಕೆಲವು ಗೊತ್ತಾದ ಅಂಗಗಳಲ್ಲಿ ಗಂತಿಯ (ಟ್ಯೂಮರ್) ಹೆರಜಾತಿನಾಟಿಗಳು ಬದುಕಿ ಉಳಿಯಬಹುದು.

 ಚರ್ಮ, ಎಲುಬು, ಮೆಲ್ಲೆಲುಬುಗಳ ಬಿಡಿ ತನ್ನ ನಾಟಿಗಳನ್ನು ಮುಖ್ಯವಾಗಿ ಸುರೂಪಿಕ ಶಸ್ತ್ರವೈದ್ಯ (ಪ್ಲಾಸ್ಟಿಕ್ ಸರ್ಜನ್) ಅಡ್ಡಿ ಆತಂಕಗಳಿಲ್ಲದೆ ಧಾರಾಳವಾಗಿ ಹಾಕುವುದುಂಟು. ಆಳವಾಗಿ ಸುಟ್ಟಿದ್ದರಿಂದ ಆಗುವ ಗಾಯಗಳ ಚಿಕಿತ್ಸೆಯಲ್ಲಿ ಚರ್ಮದ ನಾಟಿಗಳ ಬಳಕೆ ಹೆಚ್ಚು ಚಾಲ್ತಿಯಲ್ಲಿದೆ.  ಚರ್ಮದ ಒಂದು ತೆಳುಪದರವನ್ನು ಮಾತ್ರ ಎತ್ತಿಕೊಳ್ಳುವುದರಿಂದ ದಾನಿಯ ಚರ್ಮಕ್ಕೆ ಹಾನಿ ತಟ್ಟದೆ ವಾಸಿಯಾಗುತ್ತದೆ.  ಅರಿವಿನ ಇಡೀ ಸಣ್ಣ ನರಗಳ ತಿರಿಗಳನ್ನು ತೆಗೆದು ಹುರಿಗಟ್ಟಿ ಕೆಲವೇಳೆ ನಾಟಿ ಹಾಕುವುದುಂಟು. ಏಡಿಗಂತಿ ಎದ್ದಿರುವ ರೋಗಿಗಳಿಗೆ ವಿಕಿರಣರೋಗಚಿಕಿತ್ಸೆ (ರೇಡಿಯೊತೆರಪಿ) ಹಲವೇಳೆ ಮಿತಿಮೀರಿ ಕೊಡಬೇಕಾಗಿರುವ ಮುಂಚೆ, ಅವನ ಮೂಳೆಯ ಮಜ್ಜೆಯನ್ನು ತೆಗೆದು ಇರಿಸಿಕೊಂಡಿದ್ದು ಅದೇ ರೋಗಿಗೆ ಅದನ್ನು ಅವನ ತನ್ನನಾಟಿಯಾಗಿ ಕೊಡುವುದುಂಟು. ಏಡಿಗಂತಿ ಎದ್ದಿರುವುದಕ್ಕಾಗಿ ಕೆಟ್ಟಿರುವ ಭಾಗವನ್ನು ಕೊಯ್ದುಹಾಕಿದಮೇಲೆ ಉಳಿದ ಜಠರ, ಕರುಳುಗಳ ತೊಟ್ಟುಗಾಲು (ಪೆಡಿಕಲ್) ಇರುವ ತನ್ನನಾಟಿಗಳನ್ನು ಜೀರ್ಣನಾಳ, ಎಂದಿನಂತಾಗುವಂತೆ ಸರಿಪಡಿಸಲು ಹೊಲೆದು ಕೂಡಿಸುವುದುಂಟು.  ಹಲವೇಳೆ ಮೂತ್ರಮಂಡಲದಲ್ಲಿ ಕೆಲವು ಭಾಗಗಳನ್ನು ತುಂಡರಿಸಿ ತೆಗೆದುಹಾಕಿದಮೇಲೆ ಅದರ ಸಾಗುನಾಳವನ್ನು ಮತ್ತೆ ಎಂದಿನಂತೆ ರೂಪಿಸಲು ಕರುಳುಗಳ ತೊಟ್ಟುಗಾಲುಗಳಿರುವ ತನ್ನನಾಟಿಗಳನ್ನು ಸರಿಸಿ ಹೊಲಿವುದುಂಟು.

 ಕಣ್ಣುಗಳಲ್ಲಿ ಬಿಳಿಯ ಮಚ್ಚೆಗಳು, ಹೂಗಳು, ಶಂಕುವಿನಂತೆ ಚೂಪಾಗಿರುವ ಕಣ್ಗುಡ್ಡೆ ಇವುಗಳ ರೋಗಿಗಳಿಗೆ ಮತ್ತೆ ಕಣ್ಣು ಕಾಣುವಂತೆ ಮಾಡಲು (ನೇತ್ರದಾನ) ಕೊಡುಪೊರೆಯ ಸರಿಜಾತಿನಾಟಿಗಳನ್ನು ತಂದಿಟ್ಟು ಹೊಲೆದಾಗ, ಅವು ಮಂದವಾಗೇ ಇರಲಿ ತೆಳುವಾಗೇ ಇರಲ್ಲಿ, ಅವುಗಳೊಳಕ್ಕೆ ರಕ್ತನಾಳಗಳು ಬೆಳೆಯದಿದ್ದಲ್ಲಿ ಮಾತ್ರ ಗಾಜಿನಂತೆ ಪಾರದರ್ಶಕವಾಗಿ (ಟ್ರಾನ್ಸ್‍ಪೇರೆಂಟ್) ತಿಳಿಯಾಗಿರುತ್ತದೆ. ಚರ್ಮದ ಸರಿ ಜಾತಿನಾಟಿಗಳು ಕೆಲವೇ ವಾರಗಳು ಬದುಕಿರುವುವಾದರೂ ಮೈಯೆಲ್ಲ ಬೆಂದುಹೋಗಿರುವ ರೋಗಿಗಳಿಗಂತೂ ಅವು ಪ್ರಾಣದಾಯಕ. ರೋಗಿ ಕೊಂಚ ಚೇತರಿಸಿಕೊಂಡಮೇಲೆ ಅವುಗಳ ಬದಲಾಗಿ ತನ್ನ ನಾಟಿಗಳನ್ನು ಹಾಕಬಹುದು. ಎಲುನೇರ್ಪಿಕ (ಆರ್ತೊಪಿಡಿಕ್) ಶಸ್ತ್ರವೈದ್ಯದಲ್ಲಿ ಎಲುಬಿನ ಸರಿಜಾತಿನಾಟಿಗಳು ಬಳಕೆಗೆ ಬರುವುವು. ಹಲವೇಳೆ ಇವುಗಳಲ್ಲಿ ಜೀವವಿರದು. ಬದುಕಿದ್ದರೂ ಹೆಚ್ಚು ಕಾಲ ಉಳಿಯವು. ಆದರೆ ನಾಟಿ ಪಡೆವವನ ಊತಕವೇ ಬೆಳೆಯಲು ಇವು ದಾರಿ ತೋರಿ ನೆರವಾಗುವ ಅಟ್ಟಣಿಗೆ ಆಗಿರುತ್ತವೆ. ಧಮನಿಗಳಂಥ ರಕ್ತನಾಳಗಳ ಸರಿಜಾತಿನಾಟಿಗಳನ್ನು ಹಾಕಿದಾಗ ಕೂಡ, ಒಳಗಿಂದಲೇ ಬೆಳೆದು ಬರುವ ಊತಕಕ್ಕೆ ಅಟ್ಟಣಿಗೆ ಮಾತ್ರ ಆಗಿರುವುವು. ಇತ್ತೀಚೆಗೆ ಜೀವಂತ ಧಮನಿಗಳ ಬದಲಾಗಿ ಕೃತಕ ಹೆಣಿಗೆ ಬಲೆಯ ಕೊಳವೆಗಳೇ ಚಾಲ್ತಿಗೆ ಬರುತ್ತಿವೆ. ದಾನಿ ಒಂದೇ ಲಿಂಗದ ಅವಳಿಯಾಗಿದ್ದರೆ ಮಾತ್ರ ಇಡೀ ಮೂತ್ರಪಿಂಡವನ್ನು ಸರಿಜಾರಿನಾಟಯಾಗಿ ಹಾಕಬಹುದು. ಹಾಗಿಲ್ಲವಾದರೆ, ನಾಟಿ ಹಾಕಿದ್ದು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಬದುಕುಳಿದು ಕೆಲಸ ಮಾಡದು. ಅಷ್ಟು ದಿನಗಳು ಮಾತ್ರ ಕೃತಕ ಮೂತ್ರಪಿಂಡಯಂತ್ರವನ್ನೇ ರೋಗಿಗೆ ತಗುಲಿಸಿಡುವುದು ಇನ್ನೂ ಸರಳ; ಕಡಿಮೆ ಖರ್ಚಿನದು. ಬಿಳ್ಕಣತೆಯ (ಲೂಕೀಮಿಯ), ಏಡಿಗಂತಿಯ ರೋಗಿಗಳಿಗೆ ವಿಕಿರಣರೋಗ ಚಿಕಿತ್ಸೆಯೊಂದಿಗೆ ರಕ್ತವಿಕಾಸಕ ಊತಕವನ್ನು (ಮೂಳೆಯ ಮಜ್ಜೆ) ಸರಿಜಾತಿನಾಟಿಯಾಗಿ ನೀಡುವುದು ಪ್ರಯೋಗದ ಪ್ರಾಣಿಗಳಲ್ಲಿ ಮಾತ್ರ ಇಲ್ಲಿನ ತನಕ ಸಾಧ್ಯವಾಗಿದೆ.

 ಜೀವ ಇರಬೇಕಿಲ್ಲದ ರಕ್ತ, ಎಲುಬು, ಕೋಡುಪೊರೆ, ರಕ್ತನಾಳಗಳ ನಾಟಿಗಳನ್ನು ದಾಸ್ತಾನಾಗಿ ಇಟ್ಟಿರಲು ನೀರ್ಗಲ್ಲಾಗಿಸಿ, ನೀರ್ಗಲ್ಲಲ್ಲಿ ಒಣಗಿಸಿ, ಇಲ್ಲವೇ ನಂಜುರೋಧಕಗಳಲ್ಲಿ (ಆಂಟಿಸೆಪ್ಟಿಕ್ಸ್) ಇರಿಸಬೇಕು. ್ರ4% ಸೆಂ. ಶೈತ್ಯದಲ್ಲಿ ಚರ್ಮದ ನಾಟಿಗಳು ಕೆಲವು ವಾರಗಳೂ, ಗ್ಲಿಸರಾಲಲ್ಲಿ ಅದ್ದಿ-7್ರ9% ಸೆಂ. ಶೈತ್ಯಕ್ಕೆ ಇಳಿಸಿದರೆ ಕೆಲವು ತಿಂಗಳೂ ಉಳಿದಿರುತ್ತವೆ. ಏರಿದೊತ್ತಡದ (ಹೈಪರ್‍ಬೇರಿಕ್) ಆಮ್ಲಜನಕದಲ್ಲಿ ಇರಿಸಿದ್ದರೂ ಅನುಕೂಲಕರ. ರಕ್ತನಿಧಿ ಇರುವ ಹಾಗೇ ಪ್ರಾಣ ಉಳಿಸಲು ಬೇಕೆಂದವರಿಗೆ ನೀಡಲು ಬದುಕಿರುವ ಅಂಗನಿಧಿಯನ್ನು ಏರ್ಪಡಿಸುವ ಕಾಲವೂ ಬರಬಹುದು. ಆದರೆ ಇಡೀ ಅಂಗಗಳನ್ನು ನೀರ್ಗಲ್ಲಾಗಿಸಿಯೋ ಅವುಗಳ ಮೂಲಕ ಎಡೆಬಿಡದೆ ರಕ್ತ ಹರಿಸಿಯೋ ಬಹಳ ಕಾಲ ಕೆಡದಂತಿರಿಸುವುದು ಇನ್ನೂ ಕೈಗೂಡಿಲ್ಲ.

  ಅಂಗಗಳ ಬದಲಿ ನಾಟಿಯ ಮುನ್ನಡೆ ಮುಖ್ಯವಾಗಿ ಶಸ್ತ್ರಕ್ರಿಯೆಯ ತಂತ್ರದಲ್ಲಿ ಆಗುತ್ತಿದೆ. ಮರೆವಣೆಯನ್ನು ಅಣಗಿಸುವ, ಬದುಕಿರುವ ಅಂಗ ಕೆಡದಂತಿರಿಸುವ ವಿಧಾನಗಳು ಇನ್ನೂ ಚೆನ್ನಾಗಬೇಕು. ಬದಲಿ ಅಂಗ ನಾಟಿ ಹಾಕುವುದು ವಿಪರೀತ ಖರ್ಚಿನ ವಿಷಯ. ಹಾಗೆ ಮಾಡುವಾಗ ಬದುಕಿರುವುದರಿಂದ ಅಂಗವನ್ನು ಎತ್ತಿಕೊಳ್ಳುವಾಗ ಮಾನವತೆ, ನೀತಿ, ಧರ್ಮಗಳೂ ಇತರ ಪ್ರಶ್ನೆಗಳೂ ಎದುರಾಗುವವು. ಒಬ್ಬನಿಂದ ಜೀವಾಳದ ಅಂಗವನ್ನು ಕಿತ್ತುಕೊಳ್ಳುವುದಾದರೆ, ಸಾವು ಎಂದರೇನು, ಯಾವ ಅಂಗ ಸತ್ತರೆ ಸಾವು, ಇವೆಲ್ಲ ಚರ್ಚಾಸ್ಪದ.

 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ